ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ |
ಸೋದರಮಾವನ ಮಧುರೆಲಿ ಮಡುಹಿದ ||
ಯಶೋದೆ ಕಂದ ನೀ ಬಾರೋ ||ಪ ||
||ಯಾದವ ನೀ ಬಾ ||
ಕಾಲಲಿ ಕಿರುಗೆಜ್ಜೆ ಘಲುಘಲಿರೆನುತಲಿ |
ಝಣ ಝಣ ವೇಣುನಾದದಲಿ |
ಚಿಣಿಕೋಲು ಚೆಂಡು ಬುಗುರಿಯನಾಡುತ |
ಸಣ್ಣವರ ಒಡಗೂಡಿ ನೀ ಬಾರೋ ||
||ಯಾದವ ನೀ ಬಾ ||
ಶಂಖ ಚಕ್ರಗಳು ಕೈಯಲಿ ಹೊಳೆಯುತ |
ಬಿಂಕದ ಗೋವಳ ನೀ ಬಾರೋ |
ಅಕಳಂಕ ಮಹಿಮನೆ ಆದಿನಾರಾಯಣ |
ಬೇಕೆಂಬ ಭಕುತರ ಬಳಿ ಬಾರೋ ||
||ಯಾದವ ನೀ ಬಾ ||
ಖಗವಾಹನನೇ ಬಗೆಬಗೆರೂಪನೆ |
ನಗುಮೊಗದರಸನೆ ನೀ ಬಾರೋ |
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ |
ಪುರಂದರ ವಿಠಲ ನೀ ಬಾರೋ ||
||ಯಾದವ ನೀ ಬಾ ||
***