ಭಕುತ ಜನ ಮುಂದೆ | ನೀನವರ ಹಿಂದೆ |

ಯುಕುತಿ ಕೈಗೊಲ್ಲದೋ ಗಯಾಗದಾಧರನೇ ||

||ಪ ||

ಕಟ್ಟೆರಡು ಬಿಗಿದು ನದಿ ಸೂಸಿ ಹರಿಯುತ್ತಿರೇ |

ಕಟ್ಟಲೆಯಲ್ಲಿ ಹರಿಗೋಲು ಹಾಕಿ ||

ನೆಟ್ಟನಾಚೆಗೀಚೆಗೆ ಪೋಗಿ ಬರುವಾಗ |

ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆಯೇ ||

ನೀನವರ ಹಿಂದೆ |ನೀನವರ ಹಿಂದೆ||

||ಭಕುತ ಜನ ಮುಂದೆ ||

ಕಾಳೆಹೆಗ್ಗಾಳೆ ಧುನ್ಧುಭಿ ಭೇರಿ ತಮ್ಮಟೆ |

ನಿಸ್ಸಾಳ ನಾನಾ ವಾದ್ಯ ಘೋಷಣಂಗಳು ||

ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ |

ಆಳು ಮುಂದಲ್ಲದೆ ಅರಸು ತಾ ಮುಂದೆಯೇ ||

ನೀನವರ ಹಿಂದೆ |ನೀನವರ ಹಿಂದೆ ||

||ಭಕುತ ಜನ ಮುಂದೆ ||

ಉತ್ಸವದಿ ವಾಹನವು ಬೀದಿಯಲ್ಲಿ ಮೆರೆಯುತಿರೆ |

ಸತ್ಸಂಗತಿಗೆ ಹರಿಯ ದಾಸರೆಲ್ಲ ||

ವತ್ಸಲಾ ಸಿರಿ ವಿಜಯ ವಿಠಲ ವೆಂಕಟಾಧೀಶ |

ವತ್ಸ ಮುಂದಲ್ಲದೆ ಧೇನು ತಾ ಮುಂದೆಯೇ ||

ನೀನವರ ಹಿಂದೆ |ನೀನವರ ಹಿಂದೆ ||

||ಭಕುತ ಜನ ಮುಂದೆ ||

***