ಅಂಬಿಗ ನಾ ನಿನ್ನ ನಂಬಿದೆ |
ಜಗದಂಬಾರಮಣ ನಿನ್ನ ಹೊಂದಿದೆ ||ಪ||
ತುಂಬಿದ ಹರಿಗೋಲಂಬಿಗ
ಅದಕೊಂಬತ್ತು ಛಿಧ್ರವು ಅಂಬಿಗ ||
ಸಂಭ್ರಮದಿಂ ನೋಡಂಬಿಗ|
ಅದರಿಂಬು ನೋಡಿ ನಡೆಸಂಬಿಗ ||
||ಅಂಬಿಗ ||
ಹೊಳೆಯ ಭರವ ನೋಡಂಬಿಗ |
ಅಲ್ಲಿ ಸೆಳೆವು ಘನವಯ್ಯ ಅಂಬಿಗ ||
ಸುಳಿಯೋಳು ಮುಳುಗಿದೆ ಅಂಬಿಗ|
ಎನ್ನಸೆಳೆದುಕೊಂಡೊಯ್ಯೋ ನೀನಂಬಿಗ ||
||ಅಂಬಿಗ ||
ಆರು ತೆರೆಯನೋಡಂಬಿಗ|
ಅದು ಏರಿ ಬರುತಲಿದೆ ಅಂಬಿಗ||
ಯಾರಿಂದಲಾಗದು ಅಂಬಿಗ|
ಅದ ನಿವಾರಿಸಿ ದಾಟಿಸೋ ಅಂಬಿಗ||
||ಅಂಬಿಗ ||
ಸತ್ಯವೆಂಬುದೆ ಹುಟ್ಟಂಬಿಗ|
ಸದಾ ಭಕ್ತಿಯೆಂಬುದೆ ಪಥವಂಬಿಗ||
ನಿತ್ಯ ಮೂರುತಿ ನಮ್ಮ ಪುರಂದರ ವಿಠಲನ |
ಮುಕ್ತಿ ಮಂಟಪಕೊಯ್ಯೋ ಅಂಬಿಗ||
||ಅಂಬಿಗ ||
***